Monday, 21 September 2015

ಸೀಸದಲ್ಲಿ ಮೂಡಿದ ಸಾಹಸಸಿಂಹ





ಇದು ನಾನು Engineeringನ ಕೊನೆಯ ಸೆಮ್'ನ ಸ್ಟಡಿ ಹಾಲಿಡೇ ಹೊತ್ತಿನಲ್ಲಿ ಬಿಡಿಸಿದ ಚಿತ್ರ. ಇದನ್ನು ಬಿಡಿಸಿದ ಮೇಲೆ ಹಲವಾರು ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದ್ದೇನೆ. ಇಲ್ಲಿಯವರೆಗೂ ಈ ಚಿತ್ರ ಕೊಟ್ಟಷ್ಟು ತೃಪ್ತಿ ಬೇರೆ ಯಾವ ಚಿತ್ರವೂ ಕೊಟ್ಟಿಲ್ಲ. ಇದೂ ಕೂಡ ಅದ್ಭುತವಾಗಿ ಬಿಡಿಸಿದ ಚಿತ್ರವೇನು ಅಲ್ಲ. ಆದರೆ ವಿಷ್ಣುವರ್ಧನ್ ಅವರ ನೈಜವಾದ ಕಂಗಳಿಗೂ ಇಲ್ಲಿ ಬಿಡಿಸಿರುವ ಕಣ್ಣುಗಳಿಗೂ ತುಂಬಾ ಸಾಮ್ಯತೆ ಇದೆ.


ನನಗೆ ತಿಳಿದಿರುವ ಹಾಗೆ ನಮ್ಮ ಜನರೇಶನ್ನಿನ ಸುಮಾರು ೮೦ ಪ್ರತಿಶತ ಕನ್ನಡಿಗರ ಬಾಲ್ಯದ ಹೀರೋ ವಿಷ್ಣುವರ್ಧನ್ ಅವರೇ ಆಗಿರುತ್ತಾರೆ. ಆಗ ಡಾ.ರಾಜಕುಮಾರ್  ವರ್ಚಸ್ಸು ತುಂಬಾನೇ ಇದ್ದರೂ ವಿಷ್ಣುವರ್ಧನ್ ಅವರು ಎಲ್ಲ ಹುಡುಗರ ಮೆಚ್ಚಿನ ನಾಯಕ ಆಗಿದ್ದರು. ಅದಕ್ಕೆ ಕಾರಣ  ಅವರು ಹೆಚ್ಚಾಗಿ ನಟಿಸಿದ್ದು ಆಕ್ಷನ್ ಭರಿತ ಚಿತ್ರಗಳಲ್ಲೇ. ಎಡಗೈನಿಂದ ವಿಷ್ಣು ಮಾಡುತ್ತಿದ್ದ ವಿವಿಧ ರೀತಿಯ ಚಲನೆಗಳು, ಬೆರಳಿನಿಂದ ಬಾಯಿಗೆ ಬಡಿದು ಟಪ್ ಎಂದು ಶಬ್ದವನ್ನು ತರುತ್ತಿದ್ದ ರೀತಿ, ಕೈಯಲ್ಲ್ಲಿ ತೊಟ್ಟ ಕಡಗವನ್ನು ಆಯುಧವನ್ನಾಗಿ ಬಳಸುವದು, ಇವೆಲ್ಲ ವಿಷಯಗಳು ಅವರ ಚಿತ್ರಗಳಲ್ಲಿ ಇನ್ನಷ್ಟು ಆಸಕ್ತಿಗೆ ಕಾರಣವಾಗಿಸಿದ್ದವು. ಅದಲ್ಲದೆ ರಾಜಕುಮಾರ್ ಮತ್ತು ವಿಷ್ಣುವರ್ಧನ್ ನಡುವೆ ವೈಮನಸ್ಯ ಇದೆ ಎಂಬ ಊಹಾಪೋಹಗಳು , ಅದರೊಡನೆ ಬೆಳೆದ ಸುಳ್ಳು ಕಥೆಗಳು ಸಾಹಸಪ್ರಿಯ ಹುಡುಗರಿಗೆ ವಿಷ್ಣು ಒಬ್ಬ ಐಕಾನ್'ನಂತೆ ತೋರಲು ಕಾರಣವಾಗಿಸಿದವು (ಅದೆಲ್ಲ ಸುಳ್ಳು ಎಂದೂ ಅವರಿಬ್ಬರ ನಡುವೆ ಯಾವುದೇ ರೀತಿಯ ಜಗಳಗಲಿರಲಿಲ್ಲವೆಂದು ದೊಡ್ಡವರಾದಂತೆ ತಿಳಿಯುತ್ತ ಬಂತು).  ಗೆಳೆಯರೊಡನೆ ಅವರ ದೊಡ್ಡ ಅಭಿಮಾನಿ ಯಾರು ಎಂಬುದನ್ನು ನಿರ್ಧರಿಸಲು ಹಲವು ಕಸರತ್ತು ಮಾಡುತ್ತಿದ್ದೆವು. ಹಲವು ಬಾರಿ ಇದೇ ವಿಷಯಕ್ಕಾಗಿ ಹೊಡೆದಾಡಿದ್ದೂ ಇದೆ.

ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಆಪ್ತರಕ್ಷಕ ಚಿತ್ರದವರೆಗೂ ವಿಷ್ಣು ಅವರೇ ನಮ್ಮ ಹೀರೋ. ಮುಂದೆ ಕೂಡ ಅವರ ಜಾಗವನ್ನು ಯಾರು ಪಡೆಯಲಾರರು ಅನಿಸುತ್ತದೆ. ನಮಗೆ ಆಗ ಯಾವುದೇ ಸೂಪರ್ಮ್ಯಾನ್, ಬ್ಯಾಟ್ಮ್ಯಾನ್ ಗಳಿರಲಿಲ್ಲ. ಆದರೆ  ಸಾಹಸಸಿಂಹ, ಮೈಸೂರು ಹುಲಿ, ಬಂಗಾರದ ಜಿಂಕೆ ಮುಂತಾದವು ಅದರ ಕೊರತೆಯನ್ನು ನೀಗಿಸಿದ್ದವು ಎನ್ನಬಹುದು.

ಸಾಹಸಸಿಂಹ ಅವರು ಸಾಧನೆಯ ಶಿಖರವನ್ನು ಹತ್ತಿದ ಮೇಲೂ ಗರ್ವ ತೋರಲಿಲ್ಲ. ಚಿತ್ರರಂಗದಲ್ಲಿ ಅವರು ಔನ್ನತ್ಯಕ್ಕೆ ಏರುತ್ತಿದ್ದಂತೆ ಆಧ್ಯಾತ್ಮದಲ್ಲಿ ಕೂಡ ಮುಳುಗಿಬಿಟ್ಟರು. ಮೊನ್ನೆ, ಬಹಳ ವರ್ಷಗಳ ಹಿಂದೆ ವಿಷ್ಣು ಅವರು ಉದಯ ನ್ಯೂಸ್ಗೆ ಕೊಟ್ಟ ಸಂದರ್ಶನವನ್ನು ನೋಡಿದೆ . ಅದನ್ನು ನೋಡುತ್ತಿದ್ದರೆ ವಿಷ್ಣು ವೇದಾಂತಿಯಂತೆ ಆಧ್ಯಾತ್ಮದಲ್ಲಿ ತಮ್ಮನ್ನು ಪೂರ ತೊಡಗಿಸಿಕೊಂಡಿದ್ದರು ಅನಿಸುತ್ತದೆ ಆಧ್ಯಾತ್ಮದಲ್ಲಿನ ಅವರ ಆಸಕ್ತಿ ಅವರ ಜೀವನ ವಿಧಾನವನ್ನೇ ಬದಲಾಯಿಸಿತ್ತು. ಇನ್ನು ಹಲವು ಕಾಲ ಬಾಳಬೇಕಾದ ಆ ಕಲಾವಿದ ಬೇಗನೆ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಲು, ಜೀವನದ ಬಗ್ಗೆ ಬದಲಾದ ಅವರ ನಿಲುವೇ ಕಾರಣ ಎಂದು ತೋರುತ್ತದೆ



No comments:

Post a Comment