Monday, 3 February 2020

ಚಹಾ




ಒಣಗಿದ ಎಲೆಗಳ ಕಡುಬಣ್ಣವೇ..
ಕೆನೆಭರಿತ ಹಾಲಿನ ಲಘುಸಿಹಿಯೇ..
ಕಬ್ಬಿನ ರಸದ ಘನರುಚಿಯೇ..
ಅಗ್ನಿಯ ಹಸಿವಿಗೆ ನೀ ಕುದಿಯೇ..

ಸಣ್ಣಗೆ ಬೆಚ್ಚಗೆ ನಿನ್ನ ಆವಿ ಹೊರಬರುತಿರಲು..
ತಣ್ಣನೆ ಕೈಯಲಿ ನಿನ್ನಾವರಿಸಿದ ಬಟ್ಟಲ ಹಿಡಿಯಲು..
ಆಘ್ರಾಣದ ಹಸಿವಿನಿಂದ ನಾಸಿಕವು ಬಿಸಿಯಾಗುತಿರಲು..
ಮೆಲ್ಲಗೆ ನದಿಯಂತೆ ನಾಲಿಗೆಗೆ ತಾಕುವ ಬಿಸಿಹಾಲಿನ ಹೊನಲು..

ಚಹಾ ☕ : ನೀನೆ ಆಗಿರಬಹುದು ಅಮೃತಕೆ ತಿರುಳು...

ಸರಳ‌ಜೀವಿ

ಇಳೆಯ ಮುತ್ತುತಿರಲಿ ಮಳೆ..
ತುಟಿಗಳಿಗೆ ಹಬ್ಬುತಿರಲಿ ಚಹದ ಬಿಸಿ..
ಜಿಹ್ವಕ್ಕೆ ಕೊಳ್ಳಿ ಇಡುತಿರಲಿ ಮಿರ್ಚಿಯ ರುಚಿ..
ಸರಳ‌ಜೀವಿ ನಾನು.. ಬೇಡ ಇನ್ನೇನೂ.😎🙂

ಸಾಲುಮರದ ತಿಮ್ಮಕ್ಕ



ಶಾಲೆ ಕಲಿತ ಕೈಗಳಲ್ಲ ಅವು,ಸಾಲುಸಾಲು ಮರಗಳ ನೆಟ್ಟವು..
ಮಗುವನಾಡಿಸಿದ ಮಡಿಲಲ್ಲ ಅವಳದು, ಬಿಸಿಲಲ್ಲಿ ಬೆಂದವನಿಗೆ ಆಶ್ರಯನಿತ್ತವು..
ತನಗೆಂದು ಆಸ್ತಿ ಮಾಡಲಿಲ್ಲ ಆ ತಾಯಿ.. ಭೂತಾಯಿಗೆ ವನದ ಸಿರಿಯ ದಾನವಿತ್ತಳು..
#ಸಾಲುಮರದ ತಿಮ್ಮಕ್ಕ..

ನಿದ್ರೆ

ನಿದ್ರೆ : ಪರಿಶ್ರಮಿಗೆ ಸಿಗುವ ಸಿಹಿಫಲ,
ಬಳಲಿದವನು ಪಡೆವ ಬಳುವಳಿ,
ಚಿಂತಿಸುವ ಮನಸಿಗೆ ಮರೀಚಿಕೆ, ಆಲಸಿಯ ಕಾರ್ಯಕ್ಷೇತ್ರ, ITಯವನು ಸ್ವತಂತ್ರವಾಗಿ ಕನಸು ಕಾಣುವ ಏಕೈಕ ಮಾರ್ಗ..
#WorldSleepDay -#LetmeSleep😴😴

Friday, 2 March 2018

ಬಾರಿಸು ಕನ್ನಡ ಡಿಂಡಿಮವಾ -- Kannada song

"ಬಾರಿಸು ಕನ್ನಡ ಡಿಂಡಿಮವಾ"...
ನಾನು ಇಲ್ಲಿಯವರೆಗೆ ಕೇಳಿರುವ ಅತ್ಯುತ್ತಮ ಹಾಡುಗಳಲ್ಲಿ ಒಂದು..
ಕೆಲ ಹಾಡುಗಳ ಮೇಕಿಂಗ್ ಅದ್ಭುತವಾಗಿರುತ್ತೆ.. ಕೆಲವು ಅದ್ಭುತ ಸಂಗೀತವನ್ನು ಹೊಂದಿರುತ್ತವೆ..
ಕೆಲವು ಜನರಿಗೆ ಹಾಡಿನ ಸಂಗೀತಕ್ಕಿಂತ ಅದರಲ್ಲಿನ ಸಾಹಿತ್ಯ ಇಷ್ಟವಾಗುತ್ತೆ..
ಆದರೆ ಈ ಹಾಡು ಸ್ವಲ್ಪ ಡಿಫರೆಂಟ್.. ಕುವೆಂಪುರವರು ಬರೆದ, ಎಲ್ಲ ಕನ್ನಡಿಗರಿಗೂ ಸುಪರಿಚಿತವಾದ ಗೀತೆಯಿದು.. ಆದರೆ ಇದರಲ್ಲಿ ನನಗೆ ಇಷ್ಟವಾಗಿದ್ದು ಯುವಮನಸ್ಸುಗಳಿಗೆ ತಲುಪುವಂತೆ ಇರುವಂತ ಮೇಕಿಂಗ್.. ಹಾಡಿನ ಮೊದಲ ದೃಶ್ಯದಲ್ಲಿ ಬರುವ ತಮಿಳು , ತೆಲುಗು, ಹಿಂದಿ, ಇಂಗ್ಲಿಷ್ ಭಾಷಿಗರ ಸಂಭಾಷಣೆಗಳು ಕರ್ನಾಟಕದಲ್ಲಿ ಕನ್ನಡದ ಸಧ್ಯದ ಪರಿಸ್ಥಿತಿಯನ್ನು ತೊರಿಸುವಂತಿದ್ದರೆ, ಮುಂದೆ ಬರುವ ಹಾಡು ಕರುನಾಡಲ್ಲಿ ಕನ್ನಡದ ಪಾರುಪತ್ಯ ಇದ್ದೆ ಇರುತ್ತದೆ ಎಂಬ ಸಮಾಧಾನ ಕೊಡುತ್ತದೆ..
ಯಾವುದೇ ಅದ್ಧೂರಿತನ ಬಳಸದೆ, ನೈಜತೆಯಲ್ಲೇ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ... ಶ್ರೀಮಂತಿಕೆ ಅನ್ನುವದು ಸಾಹಿತ್ಯದಲ್ಲಿ , ಭಾವದಲ್ಲಿ, ಕನ್ನಡ ಅಭಿಮಾನದಲ್ಲಿ ಎಂಬುದು ಸ್ಪಷ್ಟವಾಗುತ್ತದೆ.. ಮಧ್ಯೆ ಬರುವ "ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು" , "ಕನ್ನಡ ಎನೆ ಕುಣಿದಾಡುವುದೆನ್ನೆದೆ,ಕನ್ನಡ ಎನೆ ಕಿವಿ ನಿಮಿರುವದು" ಸಾಲುಗಳು ನಿಮ್ಮೊಳಗಿನ ಕನ್ನಡಿಗನನ್ನು ಬಡಿದೆಬ್ಬಿದುವದು ಸತ್ಯ..
ಇಂತಹ ಅದ್ಭುತವಾದ ದೃಶ್ಯಗೀತೆ ಕೊಟ್ಟ ಕರ್ನಾಟಕ ವಾರ್ತಾ & ಸಂಪರ್ಕ ಇಲಾಖೆಗೆ ಧನ್ಯವಾದ ಹೇಳಬೇಕು.. ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು.. ಇನ್ನೊಬ್ಬ ಶ್ರೇಷ್ಠ ಲೇಖಕನ ಹೆಸರಿರುವ "ಪೂರ್ಣಚಂದ್ರ ತೇಜಸ್ವಿ" ಕನ್ನಡಿಗರ ಹೃದಯದ ತಾಳಕ್ಕೆ ಸರಿಯಾದ ಸಂಗೀತವನ್ನೇ ಸಂಯೋಜಿಸಿದ್ದಾರೆ..
ನನ್ನ ಇಷ್ಟುದ್ದದ ಸ್ಟೇಟಸ್ ಓದುವದನ್ನು ಬಿಟ್ಟು ಒಮ್ಮೆ ಈ ಹಾಡನ್ನು ಕೇಳಿ.. ನೀವು ಗುನುಗುನಿಸ್ತೀರಿ..

https://www.youtube.com/watch?v=m2pLKwlops4

"ಬಾರಿಸು ಕನ್ನಡ ಡಿಂಡಿಮವಾ... ಓ ಕರ್ನಾಟಕ ಹೃದಯ ಶಿವಾ"
#ಕನ್ನಡ

Sunday, 13 December 2015

ಪರ್ವ : ಒಂದು ಓದು

ಪರ್ವ :

ನಾನು ಓದಿದ  ಅತ್ಯಂತ ಸುಂದರ, ಶ್ರೇಷ್ಠ ಕೃತಿಗಳಲ್ಲಿ ಒಂದು. ಬಹಳ ಜನಕ್ಕೆ ಗೊತ್ತಿರುವ ಹಾಗೆ ಇದು  ಮಹಾಭಾರತದ ಕಥಾವಸ್ತುವನ್ನು ಹೊಂದಿದೆ. ಆದರೆ ಮಹಾಭಾರತದಂತಹ ಒಂದು ಮೇರು ಕೃತಿಯನ್ನು  ತಮ್ಮ ಅನುಭವದ ಒರೆಗಲ್ಲಿಗೆ ಹಚ್ಚಿ, ತಮ್ಮ ಕಲ್ಪನೆಗೆ ತಕ್ಕಂತೆ ಮೂಲ ಕಥೆಗೆ ಯಾವುದೇ  ಚ್ಯುತಿ ಬರದಂತೆ ಬರೆಯುವದಿದೆಯಲ್ಲಾ ಅದು ಅತಿ ಕಷ್ಟವಾದ ಸಂಗತಿ. ಅಂತಹ ಕೆಲಸವನ್ನು ಅತಿ  ಅಧ್ಬುತವಾಗಿ ನಿರ್ವಹಿಸಿದ್ದಾರೆ S. L. ಭೈರಪ್ಪ ಅವರು.

ಈ  ಕಾದಂಬರಿಯಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಆದರೆ ನನಗೆ ಅತಿ ಮೆಚ್ಚುಗೆಯಾಗುವ ಸಂಗತಿ  ಎಂದರೆ ಇಲ್ಲಿ ಮೂಡಿ ಬಂದಿರುವ ಮಾನವ ಸಂಬಂಧಗಳ ವಿಶ್ಲೇಷಣೆ. ನಾವು ದೇವರು ಎಂದುಕೊಂಡಿರುವ  ಅಥವಾ ಮನುಷ್ಯನಿಗಿಂತ ಹೆಚ್ಚಿನ ಶಕ್ತಿ, ಸಾಮರ್ಥ್ಯವನ್ನು ಪಡೆದಿರುವರೆಂದು ತಿಳಿದಿರುವ  ಕೃಷ್ಣ, ಅರ್ಜುನ, ಭೀಮ , ಧರ್ಮರಾಯ, ಕರ್ಣ, ಧುರ್ಯೋಧನ ಹೀಗೆ ಹಲವಾರು ಮಾನವೋತ್ತಮರು  ವಾಸ್ತವವಾಗಿ ನಮ್ಮಂತೆ ಸಾಮಾನ್ಯ ಮನುಷ್ಯರಾಗಿದ್ದರೆ ಮಹಾಭಾರತ ಹೇಗೆ ಸಂಭವಿಸಿರಬಹುದು  ಎಂಬುದೇ ಪರ್ವ ಕೃತಿಯ ವಸ್ತು.

ಸಾಮಾನ್ಯ ಮನುಷ್ಯರು ಎಂದಾಕ್ಷಣ ಭೀಮನ ರೌದ್ರತೆ,  ಧುರ್ಯೊಧನನ ಅಬ್ಬರ, ಕರ್ಣನ ಕಾರುಣ್ಯತೆ, ಅರ್ಜುನನ ಯುಧ್ಧೋತ್ಸಾಹ, ಮುಖ್ಯವಾಗಿ ಕೃಷ್ಣನ  ಚಾಣಾಕ್ಷತನ ಇವ್ಯಾವ ವಿಷಯಗಳಲ್ಲೂ  
 ನಿಮಗೆ ನಿರಾಸೆ ಆಗುವದಿಲ್ಲ. ಹಾಗೆ ಓದುತ್ತ  ಹೋದರೆ ಪ್ರತಿ ಒಬ್ಬ ಪಾತ್ರವೇ ನೀವಾಗಿ ಹೋಗುತ್ತೀರಿ. ಕುಂತಿಯ ಧೀಮಂತಿಕೆ ಮತ್ತು   ತ್ಯಾಗ, ದ್ರೌಪದಿಯ ಚಂಚಲತೆ, 5 ಗಂಡಂದಿರ ಕಟ್ಟಿಕೊಂಡರೂ ಅವಳು ಅನುಭವಿಸುವ ಏಕಾಂಗಿತನ,  ಗಾಂಧಾರಿಯ ಮನದ ಮೂಲೆಯ ನೈರಾಷ್ಯ ಭಾವಗಳು, ಅವಳ ಪುತ್ರ ವಾತ್ಸಲ್ಯ ಏನಿಲ್ಲ. ಎಲ್ಲವೂ  ಇದರಲ್ಲಿದೆ.

ಮಹಾಭಾರತದಲ್ಲಿ ನಮಗೆ ಉಪಪಾತ್ರಗಳಂತೆ ಕಂಡುಬರುವ ಶಲ್ಯ, ಸಾತ್ಯಕಿ,  ವಿದುರ, ಸಂಜಯ, ಕೃಪಾಚಾರ್ಯ, ಏಕಲವ್ಯ, ಕೃಷ್ಣ ವರಿಸಿದ ಗೋಪಿಕೆಯರು ಇವರೆಲ್ಲರ ಮನದ  ಭಾವಗಳು ನಮಗೆ ತಲುಪಿರಲಾರವು. ಆದರೆ ಈ ಕೃತಿಯಲ್ಲಿ ನಮ್ಮಂತೆ ಒಬ್ಬ ಓದುಗನಂತ ಒಬ್ಬನನ್ನು  ಪ್ರೇಕ್ಷಕನನ್ನಾಗಿ ಮಾಡಿ ಅವನಿಂದ ಕಥೆಯನ್ನು ನಡೆಸಿಕೊಂಡು ಹೋಗಿದ್ದಾರಲ್ಲ, ಅದು ಕೂಡ  ಲೇಖಕನ ಸತ್ವವನ್ನು ತೋರಿಸುತ್ತದೆ.

ಇನ್ನು ಇದರಲ್ಲಿ ನನಗೆ ಕಂಡುಬಂದಂತೆ ಸುಂದರವಾದ ಅಂಶಗಳು: 

೧.  ಭೀಮ ಗಧಾಯುದ್ಧದಲ್ಲಿ  ಎಷ್ಟೇ ಪ್ರವೀಣನಾಗಿದ್ದರೂ ಅವನಿಗೆ ಮಲ್ಲಯುದ್ಧವೆಂದರೆ ಬಲು  ಇಷ್ಟ. ಅವನ ದೇಹಧಾರ್ಡ್ಯತೆ ಹೇಗಿತ್ತೆಂದರೆ ಅವನಿಗೆ ಅರಮನೆಯಲ್ಲಿದ್ದ ಯಾವ ದಾಯಾದಿಗಳೂ  ಅವನಿಗೆ 
ಸಾಟಿಯಾಗುತ್ತಿರಲಿಲ್ಲ. ಅವನು ತನ್ನ ಜೊತೆ ಮಲ್ಲಯುದ್ಧಕ್ಕೆ ಯಾವುದೂ  ಸರಿಯೆನಿಸದಾಗ ಆನೆಯ ಬಳಿ ಹೋಗಿ ಅದರ ಕಾಲನ್ನು ತಬ್ಬಿ ಹಿಡಿಯುತ್ತಾ ಅದನ್ನು ಸರಿಸಲು  ಪ್ರಯತ್ನಿಸುತ್ತಿದ್ದ. ಆನೆಯ ಕಾಲನ್ನು ಹಿಡಿದಾಗ ಎರಡೂ ಕೈಗಳು ಸಂಧಿಸುವಷ್ಟು  ವಿಶಾಲವಾಗಿತ್ತು ಆತನ ದೇಹ. ಹಿಡಿಂಬನೊಡನೆ ಯುದ್ಧಕ್ಕೆ ನಿಂತಾಗ ಆತನಿಗೆ ತನ್ನ ದೇಹಕ್ಕೆ  ಸರಿಸಮನಾದ ಒಬ್ಬ ವ್ಯಕ್ತಿಯೊಡನೆ ಸೆಣಸುತ್ತಿದ್ದೆನೆಂಬ ಹೆಮ್ಮೆ ಉಂಟಾಗುತ್ತದೆ. ಒಬ್ಬ  ಪರಾಕ್ರಮಿಯ ಸಾಮರ್ಥ್ಯ, ದೇಹಸಿರಿಯನ್ನು ವರ್ಣಿಸಿರುವ ರೀತಿ ಅದ್ಭುತವಾಗಿದೆ.

೨.  ಕೃಷ್ಣ ಕಂಸನನ್ನು ಕೊಲ್ಲಲಿಕ್ಕೆಂದೇ ಹುಟ್ಟಿರುವದು ಎಂಬ ಮಾತನ್ನು ಕಂಸನಲ್ಲಿ ಭಯ  ಮೊದಲಿನಿಂದಲೇ ಇದ್ದಿತ್ತು. ಆ ಭಯವನ್ನು ಕೃಷ್ಣ ಬಳಸಿಕೊಂಡು ದಿನದಿಂದ ದಿನಕ್ಕೆ ಭಯವನ್ನು  ಹೆಚ್ಚಿಸುತ್ತ ಹೋಗುತ್ತಾನೆ. ಕೊನೆಗೆ ಕಾಳಗಕ್ಕೆ ನಿಂತಾಗ ಕಂಸನಲ್ಲಿದ್ದ ಬೆಳೆದು  ನಿಂತಿದ್ದ  ಭಯವೇ ಅವನ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನ ಅತಿ ಸೊಗಸಾಗಿ  ವಿಶ್ಲೇಷಿಸಿದ್ದಾರೆ. ಇದರಲ್ಲಿ ಕೃಷ್ಣ ಜರಾಸಂಧನನ್ನು ಕೊಳ್ಳುವಾಗ ಆಡುವ ಮಾತುಗಳು ಆತನ  ಚಾಣಕ್ಷತೆಗೆ ಹಿಡಿದ ಕನ್ನಡಿ ಆಗಿದೆ. ಹಲವು ಸನ್ನಿವೇಶಗಳಲ್ಲಿ ಕೃಷ್ಣನ ಯುಕ್ತಿಯುತ  ಮಾತುಗಳು ನಮ್ಮ ಜೀವನಕ್ಕೆ ಅನ್ವಯವಾಗುವಂತೆ ಇವೆ.  

೩. ದ್ರೌಪದಿಯು ಹೇಗೆ ೫  ಜನರನ್ನು ಮದುವೆ ಆಗುವದು ಎಂದು ಜಿಜ್ಞಾಸೆಯಲ್ಲಿ ಇದ್ದಾಗ ಕುಂತಿ ಅವಳನ್ನು ಒಪ್ಪಿಸುವ  ರೀತಿ, ತನ್ನ ಮಕ್ಕಳು ಮುಂದೆ ಒಗ್ಗಟ್ಟಾಗಿ ಇರುವಂತೆ ನೋಡಿಕೊಳ್ಳುವವಳು ನೀನೆ ಎಂದು  ತಿಳಿಹೇಳುವ ಮಾತುಗಳು ಚೆನ್ನಾಗಿವೆ. ಅದೇ ರೀತಿ ದ್ರೌಪದಿಯ ಪ್ರೀತಿ ಹೇಗೆ ಅರ್ಜುನನ  ಕಡೆಯಿಂದ ಭೀಮನೆಡೆಗೆ ಹೊರಳುವದು. ಅದಕ್ಕೆ ಭೀಮನು ವಸ್ತ್ರಾಪಹರಣದ ದಿನ ಮಾತನಾಡಿದ  ಆಕ್ರೋಶದ ಮಾತುಗಳು ಹೇಗೆ ಕಾರಣವಾಯಿತು ಎಂಬುದು ಚೆನ್ನಾಗಿ ವಿವರಿಸಲ್ಪಟ್ಟಿದೆ.

೪.  ತನ್ನ ಐದೂ ಮಕ್ಕಳನ್ನು ಕಳೆದುಕೊಂಡು ದ್ರೌಪದಿ ಅಳುತ್ತಿರುವಾಗ ಕೃಷ್ಣ ಸಮಾಧಾನಪಡಿಸಲು   ಯತ್ನಿಸುತ್ತಾನೆ. ಆಗ ದ್ರೌಪದಿ ತನಗೆ ಪುತ್ರಶೋಕಕ್ಕಿಂತ ಐವರೂ ಗಂಡಂದಿರಲ್ಲಿ ಒಬ್ಬರೂ   ತನ್ನ ಸಂತೈಸಲಿಲ್ಲ ಎಂಬುದೇ ಹೆಚ್ಚು ದುಃಖ ನೀಡುತ್ತಿದೆ ಎನ್ನುತ್ತಾಳೆ. ಅದೇ ರೀತಿ   ಗಾಂಧಾರಿ ತನ್ನ ಎಲ್ಲ ಮಕ್ಕಳೂ ಸತ್ತ ಮೇಲೆ ತಾನು ಮದುವೆಯಾದ ನಂತರ ಕಣ್ಣಿಗೆ ಬಟ್ಟೆ   ಕಟ್ಟಿಕೊಂಡಿದ್ದು ಏಕೆ ಎಂಬುದರ  ಸತ್ಯವನ್ನು ಅರಹುತ್ತಾಳೆ. ಇವೆರಡೂ ಹೃದಯ ವಿದ್ರಾವಕ   ಸನ್ನಿವೇಶಗಳು.

೫ .ಕಾದಂಬರಿಯ ಉದ್ದಕ್ಕೂ ಆಗಿನ ಕಾಲದ ಉಡುಗೆ, ತೊಡುಗೆ, ಆಹಾರ  ಪದ್ಧತಿ, ಸೂತ ಸಂಸ್ಕೃತಿ, ದಾಸಿ ಪದ್ಧತಿ, ನಿಯೋಗಪದ್ಧತಿಗಳ ಉಲ್ಲೇಖವಿದೆ. ಎಲ್ಲವೂ ಆಗಿನ  ಕಾಲದ ವಾಸ್ತವ ಅಂಶಗಳಿರಬಹುದು. 
ಅವರ ಆಹಾರ ಪದ್ಧತಿ ಓದುತ್ತಿದ್ದರಂತೂ ಬಾಯಲ್ಲಿ ನೀರೂರುವದು ಗ್ಯಾರೆಂಟಿ. 

ಎಲ್ಲರಿಗು  ತಿಳಿದಂತೆ ಭೈರಪ್ಪಒಂದು ಕಾದಂಬರಿ ಬರೆಯಬೇಕೆಂದರೆ ವಾಸ್ತವ ಅಂಶ  ಸಂಗ್ರಹಣೆಗೆ  ತಿಂಗಳಾನುಗಟ್ಟಲೆ ಶ್ರಮವಹಿಸುತ್ತಾರೆ. ಆದರೆ ಈ ಕಾದಂಬರಿ ಬರೆಯಲು ಸರಿ  ಸುಮಾರು ೨  ವರ್ಷಗಳ ಕಾಲ ತಗೊಂಡಿದ್ದಾರೆ. ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಪುಸ್ತಕ  ಇದು ಎಂದು  ನನಗನ್ನಿಸುತ್ತದೆ. 

ಆದರೆ ಬಹಳವೇ ದೊಡ್ಡದಾಗಿರುವ ಈ ಪುಸ್ತಕ  ಓದುವದು ಆಧುನಿಕ ಪ್ರೇಮ ಕಾದಂಬರಿಗಳನ್ನು ಓದಿದಂತೆ ಅಲ್ಲ. ಕನ್ನಡ ಭಾಷೆ ಸುಲಿದ  ಬಾಳೆಹಣ್ಣಿನಂತೆ ಎಂಬ ಮಾತಿದೆ. ಅದು ಈ ಕಾದಂಬರಿಗೂ ಅನ್ವಯಿಸುತ್ತದೆ. ಆದರೆ  ಡಜನ್ನುಗಟ್ಟಲೆ ಬಾಳೆಹಣ್ಣು  ಒಮ್ಮೆಲೇ ತಿಂದರೆ ಅರಗುವದೂ ಇಲ್ಲ, ಆರೋಗ್ಯವೂ ಅಲ್ಲ.  ಅದರಂತೆ ಈ ಕಾದಂಬರಿ ಯಾರಾದರೂ  ಓದುವವರಿದ್ದರೆ ಸ್ವಲ್ಪ ಸ್ವಲ್ಪ ಓದುತ್ತ ಹೋಗಿ. ನಿಮ್ಮ  ಆಸಕ್ತಿ ಕೆರಳಿದಂತೆ ಓದುವ ಓಘ  ತಾನೇ ಹೆಚ್ಚಾಗುತ್ತಾ ಹೋಗುತ್ತದೆ. 

ಅನಿಸಿಕೆ ಬಹಳವೇ ಧೀರ್ಘವಾದರೂ ಅಂತಹ ಕೃತಿಗೆ ಇಷ್ಟು ವಿವರಣೆ ಅತ್ಯವಶ್ಯ.

Thursday, 24 September 2015

ನಾಡ-ಎಮ್ಮೆಯ ಹಾಡು

ಅ'ಕಾಡೆಮ್ಮಿ' ಅಂದರೆ ನಾಡ-ಎಮ್ಮೆ ಪ್ರಶಸ್ತಿ ಪಡೆದ ಸಾಹಿತಿ(?!)ಯೊಬ್ಬರು
ಗೋವಿಗೆ ಮಾತ್ರವೇಕೆ ಹಾಡು..? ಎಮ್ಮೆಗೂ ಬೇಕು, ತಮಗೂ ಬೇಕು
ಎಂದು ಹೆಮ್ಮೆಯಿಂದ ಹಾಡು ಬರೆದರೆ ಹೀಗಿರಬಹುದೇ...?
 (S.G.ನರಸಿಂಹಾಚಾರ್ಯರಲ್ಲಿ ಕ್ಷಮೆ ಬೇಡುತ್ತಾ)

ಬಿಟ್ಟರೆ ತಿಗಣಿಯಾದೆ, ಮೆಟ್ಟಿದರೆ ಸಗಣಿಯಾದೆ
ಸುಟ್ಟರೇ ಹೊಲಸಿಗೆ ಭೂಷಣನಾದೆ,
ಮೆಟ್ಟದೇ ಬಿಟ್ಟರೆ ತಲೆಯೇರುವ ಮರ್ಕಟನಾದೆ
ನಾನಾಗಿಬಿಟ್ಟೆನೋ ಮರಿ ದಾನವ...


ಹಾಲಾಹಲವಾದೆ, ಉಸುರಿದರೆ ವಿಷವಾದೆ
ಮೇಲೆ ಲದ್ದಿಜೀವಿಗಳ ಗೊಣ್ಣೆಯಾದೆ
ಮೇಲಾದ ತಪ್ಪಿಗೆ, ನಾ ಕೊಡೆನು ಒಪ್ಪಿಗೆ
ನಾನಾಗಿಬಿಟ್ಟೆನೋ ಮರಿ ದಾನವ...

ಬಯ್ವೆ ನಾ ದೇವರನು, ಬರೆವೆ ನಾ ವಿ'ಕೃತಿ'ಯ
ಅಳಿಗಾಲ ತಂದಿರುವೆ ಕನ್ನಡ ವ್ಯಾಕರಣಕೆ
ಮುಳುಗಿಸಿಬಿಟ್ಟಿರುವೆ ಷೇಕ್ಸ್‌ಪಿಯರನ ಸಾಹಿತ್ಯ
ನಾನಾಗಿಬಿಟ್ಟೆನೋ ಮರಿ ದಾನವ...

ಹದ್ದುಬದ್ದಿಲ್ಲದೇ ಕಸವ ನಾ ತಿನುವೆ
ಮೇದ ಕಸವ ಲೇಖನದಿ ಹೊರಬಿಡುವೆ
ಬುದ್ದು ಜೀವಿಗಳ ನಾಯಕನಂತಿರುವೆ
ನಾನಾಗಿಬಿಟ್ಟೆನೋ ಮರಿ ದಾನವ...

ನೀವೆಷ್ಟೆ ಬಯ್ದರೂ ಅಕಾಡೆಮ್ಮಿ ನಾ ಪಡೆವೆ
ಸಂಕಷ್ಟ ಬರದಂತ ಸ್ವಾತಂತ್ರ ನನಗಿಹುದು
ನಿಕೃಷ್ಟ ಮನಸಿನವರ ಸಹಕಾರ ಹಿಂದಿಹುದು
ನೀ ಏನು ಮಾಡುವೆ ಹುಲು ಮಾನವ...
😬 😤😥

‪#‎WithdrawAward‬