Sunday, 13 December 2015

ಪರ್ವ : ಒಂದು ಓದು

ಪರ್ವ :

ನಾನು ಓದಿದ  ಅತ್ಯಂತ ಸುಂದರ, ಶ್ರೇಷ್ಠ ಕೃತಿಗಳಲ್ಲಿ ಒಂದು. ಬಹಳ ಜನಕ್ಕೆ ಗೊತ್ತಿರುವ ಹಾಗೆ ಇದು  ಮಹಾಭಾರತದ ಕಥಾವಸ್ತುವನ್ನು ಹೊಂದಿದೆ. ಆದರೆ ಮಹಾಭಾರತದಂತಹ ಒಂದು ಮೇರು ಕೃತಿಯನ್ನು  ತಮ್ಮ ಅನುಭವದ ಒರೆಗಲ್ಲಿಗೆ ಹಚ್ಚಿ, ತಮ್ಮ ಕಲ್ಪನೆಗೆ ತಕ್ಕಂತೆ ಮೂಲ ಕಥೆಗೆ ಯಾವುದೇ  ಚ್ಯುತಿ ಬರದಂತೆ ಬರೆಯುವದಿದೆಯಲ್ಲಾ ಅದು ಅತಿ ಕಷ್ಟವಾದ ಸಂಗತಿ. ಅಂತಹ ಕೆಲಸವನ್ನು ಅತಿ  ಅಧ್ಬುತವಾಗಿ ನಿರ್ವಹಿಸಿದ್ದಾರೆ S. L. ಭೈರಪ್ಪ ಅವರು.

ಈ  ಕಾದಂಬರಿಯಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಆದರೆ ನನಗೆ ಅತಿ ಮೆಚ್ಚುಗೆಯಾಗುವ ಸಂಗತಿ  ಎಂದರೆ ಇಲ್ಲಿ ಮೂಡಿ ಬಂದಿರುವ ಮಾನವ ಸಂಬಂಧಗಳ ವಿಶ್ಲೇಷಣೆ. ನಾವು ದೇವರು ಎಂದುಕೊಂಡಿರುವ  ಅಥವಾ ಮನುಷ್ಯನಿಗಿಂತ ಹೆಚ್ಚಿನ ಶಕ್ತಿ, ಸಾಮರ್ಥ್ಯವನ್ನು ಪಡೆದಿರುವರೆಂದು ತಿಳಿದಿರುವ  ಕೃಷ್ಣ, ಅರ್ಜುನ, ಭೀಮ , ಧರ್ಮರಾಯ, ಕರ್ಣ, ಧುರ್ಯೋಧನ ಹೀಗೆ ಹಲವಾರು ಮಾನವೋತ್ತಮರು  ವಾಸ್ತವವಾಗಿ ನಮ್ಮಂತೆ ಸಾಮಾನ್ಯ ಮನುಷ್ಯರಾಗಿದ್ದರೆ ಮಹಾಭಾರತ ಹೇಗೆ ಸಂಭವಿಸಿರಬಹುದು  ಎಂಬುದೇ ಪರ್ವ ಕೃತಿಯ ವಸ್ತು.

ಸಾಮಾನ್ಯ ಮನುಷ್ಯರು ಎಂದಾಕ್ಷಣ ಭೀಮನ ರೌದ್ರತೆ,  ಧುರ್ಯೊಧನನ ಅಬ್ಬರ, ಕರ್ಣನ ಕಾರುಣ್ಯತೆ, ಅರ್ಜುನನ ಯುಧ್ಧೋತ್ಸಾಹ, ಮುಖ್ಯವಾಗಿ ಕೃಷ್ಣನ  ಚಾಣಾಕ್ಷತನ ಇವ್ಯಾವ ವಿಷಯಗಳಲ್ಲೂ  
 ನಿಮಗೆ ನಿರಾಸೆ ಆಗುವದಿಲ್ಲ. ಹಾಗೆ ಓದುತ್ತ  ಹೋದರೆ ಪ್ರತಿ ಒಬ್ಬ ಪಾತ್ರವೇ ನೀವಾಗಿ ಹೋಗುತ್ತೀರಿ. ಕುಂತಿಯ ಧೀಮಂತಿಕೆ ಮತ್ತು   ತ್ಯಾಗ, ದ್ರೌಪದಿಯ ಚಂಚಲತೆ, 5 ಗಂಡಂದಿರ ಕಟ್ಟಿಕೊಂಡರೂ ಅವಳು ಅನುಭವಿಸುವ ಏಕಾಂಗಿತನ,  ಗಾಂಧಾರಿಯ ಮನದ ಮೂಲೆಯ ನೈರಾಷ್ಯ ಭಾವಗಳು, ಅವಳ ಪುತ್ರ ವಾತ್ಸಲ್ಯ ಏನಿಲ್ಲ. ಎಲ್ಲವೂ  ಇದರಲ್ಲಿದೆ.

ಮಹಾಭಾರತದಲ್ಲಿ ನಮಗೆ ಉಪಪಾತ್ರಗಳಂತೆ ಕಂಡುಬರುವ ಶಲ್ಯ, ಸಾತ್ಯಕಿ,  ವಿದುರ, ಸಂಜಯ, ಕೃಪಾಚಾರ್ಯ, ಏಕಲವ್ಯ, ಕೃಷ್ಣ ವರಿಸಿದ ಗೋಪಿಕೆಯರು ಇವರೆಲ್ಲರ ಮನದ  ಭಾವಗಳು ನಮಗೆ ತಲುಪಿರಲಾರವು. ಆದರೆ ಈ ಕೃತಿಯಲ್ಲಿ ನಮ್ಮಂತೆ ಒಬ್ಬ ಓದುಗನಂತ ಒಬ್ಬನನ್ನು  ಪ್ರೇಕ್ಷಕನನ್ನಾಗಿ ಮಾಡಿ ಅವನಿಂದ ಕಥೆಯನ್ನು ನಡೆಸಿಕೊಂಡು ಹೋಗಿದ್ದಾರಲ್ಲ, ಅದು ಕೂಡ  ಲೇಖಕನ ಸತ್ವವನ್ನು ತೋರಿಸುತ್ತದೆ.

ಇನ್ನು ಇದರಲ್ಲಿ ನನಗೆ ಕಂಡುಬಂದಂತೆ ಸುಂದರವಾದ ಅಂಶಗಳು: 

೧.  ಭೀಮ ಗಧಾಯುದ್ಧದಲ್ಲಿ  ಎಷ್ಟೇ ಪ್ರವೀಣನಾಗಿದ್ದರೂ ಅವನಿಗೆ ಮಲ್ಲಯುದ್ಧವೆಂದರೆ ಬಲು  ಇಷ್ಟ. ಅವನ ದೇಹಧಾರ್ಡ್ಯತೆ ಹೇಗಿತ್ತೆಂದರೆ ಅವನಿಗೆ ಅರಮನೆಯಲ್ಲಿದ್ದ ಯಾವ ದಾಯಾದಿಗಳೂ  ಅವನಿಗೆ 
ಸಾಟಿಯಾಗುತ್ತಿರಲಿಲ್ಲ. ಅವನು ತನ್ನ ಜೊತೆ ಮಲ್ಲಯುದ್ಧಕ್ಕೆ ಯಾವುದೂ  ಸರಿಯೆನಿಸದಾಗ ಆನೆಯ ಬಳಿ ಹೋಗಿ ಅದರ ಕಾಲನ್ನು ತಬ್ಬಿ ಹಿಡಿಯುತ್ತಾ ಅದನ್ನು ಸರಿಸಲು  ಪ್ರಯತ್ನಿಸುತ್ತಿದ್ದ. ಆನೆಯ ಕಾಲನ್ನು ಹಿಡಿದಾಗ ಎರಡೂ ಕೈಗಳು ಸಂಧಿಸುವಷ್ಟು  ವಿಶಾಲವಾಗಿತ್ತು ಆತನ ದೇಹ. ಹಿಡಿಂಬನೊಡನೆ ಯುದ್ಧಕ್ಕೆ ನಿಂತಾಗ ಆತನಿಗೆ ತನ್ನ ದೇಹಕ್ಕೆ  ಸರಿಸಮನಾದ ಒಬ್ಬ ವ್ಯಕ್ತಿಯೊಡನೆ ಸೆಣಸುತ್ತಿದ್ದೆನೆಂಬ ಹೆಮ್ಮೆ ಉಂಟಾಗುತ್ತದೆ. ಒಬ್ಬ  ಪರಾಕ್ರಮಿಯ ಸಾಮರ್ಥ್ಯ, ದೇಹಸಿರಿಯನ್ನು ವರ್ಣಿಸಿರುವ ರೀತಿ ಅದ್ಭುತವಾಗಿದೆ.

೨.  ಕೃಷ್ಣ ಕಂಸನನ್ನು ಕೊಲ್ಲಲಿಕ್ಕೆಂದೇ ಹುಟ್ಟಿರುವದು ಎಂಬ ಮಾತನ್ನು ಕಂಸನಲ್ಲಿ ಭಯ  ಮೊದಲಿನಿಂದಲೇ ಇದ್ದಿತ್ತು. ಆ ಭಯವನ್ನು ಕೃಷ್ಣ ಬಳಸಿಕೊಂಡು ದಿನದಿಂದ ದಿನಕ್ಕೆ ಭಯವನ್ನು  ಹೆಚ್ಚಿಸುತ್ತ ಹೋಗುತ್ತಾನೆ. ಕೊನೆಗೆ ಕಾಳಗಕ್ಕೆ ನಿಂತಾಗ ಕಂಸನಲ್ಲಿದ್ದ ಬೆಳೆದು  ನಿಂತಿದ್ದ  ಭಯವೇ ಅವನ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನ ಅತಿ ಸೊಗಸಾಗಿ  ವಿಶ್ಲೇಷಿಸಿದ್ದಾರೆ. ಇದರಲ್ಲಿ ಕೃಷ್ಣ ಜರಾಸಂಧನನ್ನು ಕೊಳ್ಳುವಾಗ ಆಡುವ ಮಾತುಗಳು ಆತನ  ಚಾಣಕ್ಷತೆಗೆ ಹಿಡಿದ ಕನ್ನಡಿ ಆಗಿದೆ. ಹಲವು ಸನ್ನಿವೇಶಗಳಲ್ಲಿ ಕೃಷ್ಣನ ಯುಕ್ತಿಯುತ  ಮಾತುಗಳು ನಮ್ಮ ಜೀವನಕ್ಕೆ ಅನ್ವಯವಾಗುವಂತೆ ಇವೆ.  

೩. ದ್ರೌಪದಿಯು ಹೇಗೆ ೫  ಜನರನ್ನು ಮದುವೆ ಆಗುವದು ಎಂದು ಜಿಜ್ಞಾಸೆಯಲ್ಲಿ ಇದ್ದಾಗ ಕುಂತಿ ಅವಳನ್ನು ಒಪ್ಪಿಸುವ  ರೀತಿ, ತನ್ನ ಮಕ್ಕಳು ಮುಂದೆ ಒಗ್ಗಟ್ಟಾಗಿ ಇರುವಂತೆ ನೋಡಿಕೊಳ್ಳುವವಳು ನೀನೆ ಎಂದು  ತಿಳಿಹೇಳುವ ಮಾತುಗಳು ಚೆನ್ನಾಗಿವೆ. ಅದೇ ರೀತಿ ದ್ರೌಪದಿಯ ಪ್ರೀತಿ ಹೇಗೆ ಅರ್ಜುನನ  ಕಡೆಯಿಂದ ಭೀಮನೆಡೆಗೆ ಹೊರಳುವದು. ಅದಕ್ಕೆ ಭೀಮನು ವಸ್ತ್ರಾಪಹರಣದ ದಿನ ಮಾತನಾಡಿದ  ಆಕ್ರೋಶದ ಮಾತುಗಳು ಹೇಗೆ ಕಾರಣವಾಯಿತು ಎಂಬುದು ಚೆನ್ನಾಗಿ ವಿವರಿಸಲ್ಪಟ್ಟಿದೆ.

೪.  ತನ್ನ ಐದೂ ಮಕ್ಕಳನ್ನು ಕಳೆದುಕೊಂಡು ದ್ರೌಪದಿ ಅಳುತ್ತಿರುವಾಗ ಕೃಷ್ಣ ಸಮಾಧಾನಪಡಿಸಲು   ಯತ್ನಿಸುತ್ತಾನೆ. ಆಗ ದ್ರೌಪದಿ ತನಗೆ ಪುತ್ರಶೋಕಕ್ಕಿಂತ ಐವರೂ ಗಂಡಂದಿರಲ್ಲಿ ಒಬ್ಬರೂ   ತನ್ನ ಸಂತೈಸಲಿಲ್ಲ ಎಂಬುದೇ ಹೆಚ್ಚು ದುಃಖ ನೀಡುತ್ತಿದೆ ಎನ್ನುತ್ತಾಳೆ. ಅದೇ ರೀತಿ   ಗಾಂಧಾರಿ ತನ್ನ ಎಲ್ಲ ಮಕ್ಕಳೂ ಸತ್ತ ಮೇಲೆ ತಾನು ಮದುವೆಯಾದ ನಂತರ ಕಣ್ಣಿಗೆ ಬಟ್ಟೆ   ಕಟ್ಟಿಕೊಂಡಿದ್ದು ಏಕೆ ಎಂಬುದರ  ಸತ್ಯವನ್ನು ಅರಹುತ್ತಾಳೆ. ಇವೆರಡೂ ಹೃದಯ ವಿದ್ರಾವಕ   ಸನ್ನಿವೇಶಗಳು.

೫ .ಕಾದಂಬರಿಯ ಉದ್ದಕ್ಕೂ ಆಗಿನ ಕಾಲದ ಉಡುಗೆ, ತೊಡುಗೆ, ಆಹಾರ  ಪದ್ಧತಿ, ಸೂತ ಸಂಸ್ಕೃತಿ, ದಾಸಿ ಪದ್ಧತಿ, ನಿಯೋಗಪದ್ಧತಿಗಳ ಉಲ್ಲೇಖವಿದೆ. ಎಲ್ಲವೂ ಆಗಿನ  ಕಾಲದ ವಾಸ್ತವ ಅಂಶಗಳಿರಬಹುದು. 
ಅವರ ಆಹಾರ ಪದ್ಧತಿ ಓದುತ್ತಿದ್ದರಂತೂ ಬಾಯಲ್ಲಿ ನೀರೂರುವದು ಗ್ಯಾರೆಂಟಿ. 

ಎಲ್ಲರಿಗು  ತಿಳಿದಂತೆ ಭೈರಪ್ಪಒಂದು ಕಾದಂಬರಿ ಬರೆಯಬೇಕೆಂದರೆ ವಾಸ್ತವ ಅಂಶ  ಸಂಗ್ರಹಣೆಗೆ  ತಿಂಗಳಾನುಗಟ್ಟಲೆ ಶ್ರಮವಹಿಸುತ್ತಾರೆ. ಆದರೆ ಈ ಕಾದಂಬರಿ ಬರೆಯಲು ಸರಿ  ಸುಮಾರು ೨  ವರ್ಷಗಳ ಕಾಲ ತಗೊಂಡಿದ್ದಾರೆ. ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಪುಸ್ತಕ  ಇದು ಎಂದು  ನನಗನ್ನಿಸುತ್ತದೆ. 

ಆದರೆ ಬಹಳವೇ ದೊಡ್ಡದಾಗಿರುವ ಈ ಪುಸ್ತಕ  ಓದುವದು ಆಧುನಿಕ ಪ್ರೇಮ ಕಾದಂಬರಿಗಳನ್ನು ಓದಿದಂತೆ ಅಲ್ಲ. ಕನ್ನಡ ಭಾಷೆ ಸುಲಿದ  ಬಾಳೆಹಣ್ಣಿನಂತೆ ಎಂಬ ಮಾತಿದೆ. ಅದು ಈ ಕಾದಂಬರಿಗೂ ಅನ್ವಯಿಸುತ್ತದೆ. ಆದರೆ  ಡಜನ್ನುಗಟ್ಟಲೆ ಬಾಳೆಹಣ್ಣು  ಒಮ್ಮೆಲೇ ತಿಂದರೆ ಅರಗುವದೂ ಇಲ್ಲ, ಆರೋಗ್ಯವೂ ಅಲ್ಲ.  ಅದರಂತೆ ಈ ಕಾದಂಬರಿ ಯಾರಾದರೂ  ಓದುವವರಿದ್ದರೆ ಸ್ವಲ್ಪ ಸ್ವಲ್ಪ ಓದುತ್ತ ಹೋಗಿ. ನಿಮ್ಮ  ಆಸಕ್ತಿ ಕೆರಳಿದಂತೆ ಓದುವ ಓಘ  ತಾನೇ ಹೆಚ್ಚಾಗುತ್ತಾ ಹೋಗುತ್ತದೆ. 

ಅನಿಸಿಕೆ ಬಹಳವೇ ಧೀರ್ಘವಾದರೂ ಅಂತಹ ಕೃತಿಗೆ ಇಷ್ಟು ವಿವರಣೆ ಅತ್ಯವಶ್ಯ.

Thursday, 24 September 2015

ನಾಡ-ಎಮ್ಮೆಯ ಹಾಡು

ಅ'ಕಾಡೆಮ್ಮಿ' ಅಂದರೆ ನಾಡ-ಎಮ್ಮೆ ಪ್ರಶಸ್ತಿ ಪಡೆದ ಸಾಹಿತಿ(?!)ಯೊಬ್ಬರು
ಗೋವಿಗೆ ಮಾತ್ರವೇಕೆ ಹಾಡು..? ಎಮ್ಮೆಗೂ ಬೇಕು, ತಮಗೂ ಬೇಕು
ಎಂದು ಹೆಮ್ಮೆಯಿಂದ ಹಾಡು ಬರೆದರೆ ಹೀಗಿರಬಹುದೇ...?
 (S.G.ನರಸಿಂಹಾಚಾರ್ಯರಲ್ಲಿ ಕ್ಷಮೆ ಬೇಡುತ್ತಾ)

ಬಿಟ್ಟರೆ ತಿಗಣಿಯಾದೆ, ಮೆಟ್ಟಿದರೆ ಸಗಣಿಯಾದೆ
ಸುಟ್ಟರೇ ಹೊಲಸಿಗೆ ಭೂಷಣನಾದೆ,
ಮೆಟ್ಟದೇ ಬಿಟ್ಟರೆ ತಲೆಯೇರುವ ಮರ್ಕಟನಾದೆ
ನಾನಾಗಿಬಿಟ್ಟೆನೋ ಮರಿ ದಾನವ...


ಹಾಲಾಹಲವಾದೆ, ಉಸುರಿದರೆ ವಿಷವಾದೆ
ಮೇಲೆ ಲದ್ದಿಜೀವಿಗಳ ಗೊಣ್ಣೆಯಾದೆ
ಮೇಲಾದ ತಪ್ಪಿಗೆ, ನಾ ಕೊಡೆನು ಒಪ್ಪಿಗೆ
ನಾನಾಗಿಬಿಟ್ಟೆನೋ ಮರಿ ದಾನವ...

ಬಯ್ವೆ ನಾ ದೇವರನು, ಬರೆವೆ ನಾ ವಿ'ಕೃತಿ'ಯ
ಅಳಿಗಾಲ ತಂದಿರುವೆ ಕನ್ನಡ ವ್ಯಾಕರಣಕೆ
ಮುಳುಗಿಸಿಬಿಟ್ಟಿರುವೆ ಷೇಕ್ಸ್‌ಪಿಯರನ ಸಾಹಿತ್ಯ
ನಾನಾಗಿಬಿಟ್ಟೆನೋ ಮರಿ ದಾನವ...

ಹದ್ದುಬದ್ದಿಲ್ಲದೇ ಕಸವ ನಾ ತಿನುವೆ
ಮೇದ ಕಸವ ಲೇಖನದಿ ಹೊರಬಿಡುವೆ
ಬುದ್ದು ಜೀವಿಗಳ ನಾಯಕನಂತಿರುವೆ
ನಾನಾಗಿಬಿಟ್ಟೆನೋ ಮರಿ ದಾನವ...

ನೀವೆಷ್ಟೆ ಬಯ್ದರೂ ಅಕಾಡೆಮ್ಮಿ ನಾ ಪಡೆವೆ
ಸಂಕಷ್ಟ ಬರದಂತ ಸ್ವಾತಂತ್ರ ನನಗಿಹುದು
ನಿಕೃಷ್ಟ ಮನಸಿನವರ ಸಹಕಾರ ಹಿಂದಿಹುದು
ನೀ ಏನು ಮಾಡುವೆ ಹುಲು ಮಾನವ...
😬 😤😥

‪#‎WithdrawAward‬

Monday, 21 September 2015

ಸೀಸದಲ್ಲಿ ಮೂಡಿದ ಸಾಹಸಸಿಂಹ





ಇದು ನಾನು Engineeringನ ಕೊನೆಯ ಸೆಮ್'ನ ಸ್ಟಡಿ ಹಾಲಿಡೇ ಹೊತ್ತಿನಲ್ಲಿ ಬಿಡಿಸಿದ ಚಿತ್ರ. ಇದನ್ನು ಬಿಡಿಸಿದ ಮೇಲೆ ಹಲವಾರು ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದ್ದೇನೆ. ಇಲ್ಲಿಯವರೆಗೂ ಈ ಚಿತ್ರ ಕೊಟ್ಟಷ್ಟು ತೃಪ್ತಿ ಬೇರೆ ಯಾವ ಚಿತ್ರವೂ ಕೊಟ್ಟಿಲ್ಲ. ಇದೂ ಕೂಡ ಅದ್ಭುತವಾಗಿ ಬಿಡಿಸಿದ ಚಿತ್ರವೇನು ಅಲ್ಲ. ಆದರೆ ವಿಷ್ಣುವರ್ಧನ್ ಅವರ ನೈಜವಾದ ಕಂಗಳಿಗೂ ಇಲ್ಲಿ ಬಿಡಿಸಿರುವ ಕಣ್ಣುಗಳಿಗೂ ತುಂಬಾ ಸಾಮ್ಯತೆ ಇದೆ.


ನನಗೆ ತಿಳಿದಿರುವ ಹಾಗೆ ನಮ್ಮ ಜನರೇಶನ್ನಿನ ಸುಮಾರು ೮೦ ಪ್ರತಿಶತ ಕನ್ನಡಿಗರ ಬಾಲ್ಯದ ಹೀರೋ ವಿಷ್ಣುವರ್ಧನ್ ಅವರೇ ಆಗಿರುತ್ತಾರೆ. ಆಗ ಡಾ.ರಾಜಕುಮಾರ್  ವರ್ಚಸ್ಸು ತುಂಬಾನೇ ಇದ್ದರೂ ವಿಷ್ಣುವರ್ಧನ್ ಅವರು ಎಲ್ಲ ಹುಡುಗರ ಮೆಚ್ಚಿನ ನಾಯಕ ಆಗಿದ್ದರು. ಅದಕ್ಕೆ ಕಾರಣ  ಅವರು ಹೆಚ್ಚಾಗಿ ನಟಿಸಿದ್ದು ಆಕ್ಷನ್ ಭರಿತ ಚಿತ್ರಗಳಲ್ಲೇ. ಎಡಗೈನಿಂದ ವಿಷ್ಣು ಮಾಡುತ್ತಿದ್ದ ವಿವಿಧ ರೀತಿಯ ಚಲನೆಗಳು, ಬೆರಳಿನಿಂದ ಬಾಯಿಗೆ ಬಡಿದು ಟಪ್ ಎಂದು ಶಬ್ದವನ್ನು ತರುತ್ತಿದ್ದ ರೀತಿ, ಕೈಯಲ್ಲ್ಲಿ ತೊಟ್ಟ ಕಡಗವನ್ನು ಆಯುಧವನ್ನಾಗಿ ಬಳಸುವದು, ಇವೆಲ್ಲ ವಿಷಯಗಳು ಅವರ ಚಿತ್ರಗಳಲ್ಲಿ ಇನ್ನಷ್ಟು ಆಸಕ್ತಿಗೆ ಕಾರಣವಾಗಿಸಿದ್ದವು. ಅದಲ್ಲದೆ ರಾಜಕುಮಾರ್ ಮತ್ತು ವಿಷ್ಣುವರ್ಧನ್ ನಡುವೆ ವೈಮನಸ್ಯ ಇದೆ ಎಂಬ ಊಹಾಪೋಹಗಳು , ಅದರೊಡನೆ ಬೆಳೆದ ಸುಳ್ಳು ಕಥೆಗಳು ಸಾಹಸಪ್ರಿಯ ಹುಡುಗರಿಗೆ ವಿಷ್ಣು ಒಬ್ಬ ಐಕಾನ್'ನಂತೆ ತೋರಲು ಕಾರಣವಾಗಿಸಿದವು (ಅದೆಲ್ಲ ಸುಳ್ಳು ಎಂದೂ ಅವರಿಬ್ಬರ ನಡುವೆ ಯಾವುದೇ ರೀತಿಯ ಜಗಳಗಲಿರಲಿಲ್ಲವೆಂದು ದೊಡ್ಡವರಾದಂತೆ ತಿಳಿಯುತ್ತ ಬಂತು).  ಗೆಳೆಯರೊಡನೆ ಅವರ ದೊಡ್ಡ ಅಭಿಮಾನಿ ಯಾರು ಎಂಬುದನ್ನು ನಿರ್ಧರಿಸಲು ಹಲವು ಕಸರತ್ತು ಮಾಡುತ್ತಿದ್ದೆವು. ಹಲವು ಬಾರಿ ಇದೇ ವಿಷಯಕ್ಕಾಗಿ ಹೊಡೆದಾಡಿದ್ದೂ ಇದೆ.

ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಆಪ್ತರಕ್ಷಕ ಚಿತ್ರದವರೆಗೂ ವಿಷ್ಣು ಅವರೇ ನಮ್ಮ ಹೀರೋ. ಮುಂದೆ ಕೂಡ ಅವರ ಜಾಗವನ್ನು ಯಾರು ಪಡೆಯಲಾರರು ಅನಿಸುತ್ತದೆ. ನಮಗೆ ಆಗ ಯಾವುದೇ ಸೂಪರ್ಮ್ಯಾನ್, ಬ್ಯಾಟ್ಮ್ಯಾನ್ ಗಳಿರಲಿಲ್ಲ. ಆದರೆ  ಸಾಹಸಸಿಂಹ, ಮೈಸೂರು ಹುಲಿ, ಬಂಗಾರದ ಜಿಂಕೆ ಮುಂತಾದವು ಅದರ ಕೊರತೆಯನ್ನು ನೀಗಿಸಿದ್ದವು ಎನ್ನಬಹುದು.

ಸಾಹಸಸಿಂಹ ಅವರು ಸಾಧನೆಯ ಶಿಖರವನ್ನು ಹತ್ತಿದ ಮೇಲೂ ಗರ್ವ ತೋರಲಿಲ್ಲ. ಚಿತ್ರರಂಗದಲ್ಲಿ ಅವರು ಔನ್ನತ್ಯಕ್ಕೆ ಏರುತ್ತಿದ್ದಂತೆ ಆಧ್ಯಾತ್ಮದಲ್ಲಿ ಕೂಡ ಮುಳುಗಿಬಿಟ್ಟರು. ಮೊನ್ನೆ, ಬಹಳ ವರ್ಷಗಳ ಹಿಂದೆ ವಿಷ್ಣು ಅವರು ಉದಯ ನ್ಯೂಸ್ಗೆ ಕೊಟ್ಟ ಸಂದರ್ಶನವನ್ನು ನೋಡಿದೆ . ಅದನ್ನು ನೋಡುತ್ತಿದ್ದರೆ ವಿಷ್ಣು ವೇದಾಂತಿಯಂತೆ ಆಧ್ಯಾತ್ಮದಲ್ಲಿ ತಮ್ಮನ್ನು ಪೂರ ತೊಡಗಿಸಿಕೊಂಡಿದ್ದರು ಅನಿಸುತ್ತದೆ ಆಧ್ಯಾತ್ಮದಲ್ಲಿನ ಅವರ ಆಸಕ್ತಿ ಅವರ ಜೀವನ ವಿಧಾನವನ್ನೇ ಬದಲಾಯಿಸಿತ್ತು. ಇನ್ನು ಹಲವು ಕಾಲ ಬಾಳಬೇಕಾದ ಆ ಕಲಾವಿದ ಬೇಗನೆ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಲು, ಜೀವನದ ಬಗ್ಗೆ ಬದಲಾದ ಅವರ ನಿಲುವೇ ಕಾರಣ ಎಂದು ತೋರುತ್ತದೆ



ವಚನ-ಭಾಗ್ಯ

ಕಳೇ ನಿಮ್ಮ ದಾನ, ಕೊಳೆ ನಿಮ್ಮ ದಾನ
ಅಳಿದು ಉಳಿದಿರುವ ವಿದ್ಯುತ್ತು ನಿಮ್ಮ ದಾನ,
ನಿಮ್ಮ ಭಾಗ್ಯಗಳನ್ನುಂಡು ಅನ್ಯ ಪಕ್ಷಗಳಿಗೆ ಓಟು ನೀಡುವ ಕನ್ನಿಂಗ್ ಜನರ ಕ್ಷಮಿಸನಾ
ಸಿದ್ಧ'ನಾತ'.... ;-) :-P
 

Tuesday, 15 September 2015

"ನಾನೊಬ್ಬ ಅಭಿಯಂತರ"

"ನಾನೊಬ್ಬ ಅಭಿಯಂತರ"
ಭವದ ಭೌತವಿಜ್ಞಾನ,ಇಹದ ವಿದ್ಯುನ್ಮಾನ,
ನಭದ ಖಗೋಳಜ್ಞಾನದ ಬಗ್ಗೆ ಕಲಿತು
ಕೊನೆಗೆ ಗಣಕಯಂತ್ರದ ದಾಸನಾದ ನಾನು ಅಭಿಯಂತರ...
ಯಾಂತ್ರಿಕ ಜೀವನದ Software Engineer😌..

ಕಲಾಂ ಕುರಿತು ಕಲಮಿನ ಮಾತು

ಅಬ್ದುಲ್ ಕಲಾಂ ಕುರಿತು ಬರೆದದ್ದು  :

ಆಕಾಶವ ದಾಟಿ
ಸ್ವರ್ಗವ ಮುಟ್ಟಿದ
ಅಗ್ನಿಯ ರೆಕ್ಕೆ..

ದೇವಲೋಕದಲಿಂದು
ಕ್ಷಿಪಣಿ ತಂತ್ರಜ್ಞನಿಂದ
ಅಣು ಪರೀಕ್ಷೆ ..


ಕಾಣಲಾರಿರೇ ನೀವು
ಕ್ಷಿತಿಜ ಮೀರಿದ ಆ
ಗುರುವಿನ ಬ್ರಾಹ್ಮ ತೇಜ..

ಒಮ್ಮೆ ಕಣ್ಣೆತ್ತಿ ನೋಡಿ..
ನಗುಮೊಗದಿ ಹೊಳೆವ
ತಾರೆ, ಸುತ್ತುವರೆದ
ನಕ್ಷತ್ರ ಪುಂಜ..
‪#‎RIP_APJ_KALAM‬...

ಕನ್ನಡಕ್ಕೊಬ್ಬರೇ ಶಂಕರ್ ನಾಗ್

ಇದು (ಶಂಕರ್ ನಾಗ್ ಜನ್ಮ ದಿನ )ನವೆಂಬರ್ 9 , 2014 ರಂದು ಬರೆದದ್ದು : 
                              ಶಂಕರ್-ನಾಗ್ ಎಂದ ತಕ್ಷಣ ನೆನಪಾಗೋದು ಆಟೋರಾಜ ಚಿತ್ರದಲ್ಲಿ ಅವರ “ನಗುವ ಗುಲಾಬಿ ಹೂವೇ” ಹಾಡಿನ ದೃಶ್ಯ. ಆ ಹಾಡಿನಂತೆ  ಶಂಕರಣ್ಣ ಕೂಡ ಮುಗಿಲ ಮೇಲೇರಿ, ನಮ್ ಜನಗಳ ಅಭಿಮಾನ ಕಂಡು ಖುಶಿಯಿಂದ ನಗ್ತಾ  ಇದಾರೆ ಅನ್ಸುತ್ತೆ. ಅವರ ದೂರದೃಷ್ಟಿಯ ಬಗ್ಗೆ, ಹೊಸತನಕ್ಕೆ ಹಾತೊರೆಯುವ ಮನಸ್ಸಿಗೆ, ಕಲಾ ನೈಪುಣ್ಯತೆಗೆ ಸಾಟಿ ಯಾರೂ ಇಲ್ಲ ಎನಿಸುತ್ತದೆ.

                              ಅವರಲ್ಲಿ ಕಂಡ ಇನ್ನೊಂದು ಗುಣ ಎಂದರೆ ಕನ್ನಡ ಚಿತ್ರರಂಗದ ಎಲ್ಲ ಪ್ರಮುಖರೊಡನೆ ಸಹನಟರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ ರೀತಿ. ಅವರ “ಮಾಲ್ಗುಡಿ ಡೇಸ್” ಧಾರಾವಾಹಿ ನೋಡ್ತಾ ಇದ್ರೆ ನಮ್ಮ ಬಾಲ್ಯದ ನೆನಪುಗಳು ಮರು ಮಾತನಾಡುತ್ತವೆ. ಆ ಧಾರಾವಾಹಿಯ ಪ್ರತಿ ಪಾತ್ರವೂ ನಮಗೆ ಪರಿಚಿತವೇ ಎನಿಸುತ್ತದೆ. ಪಾತ್ರಧಾರಿಗಳಾದವರೂ ಕೂಡ ಕನ್ನಡ ಚಿತ್ರರಂಗದ ಗೊತ್ತಿರುವ ಕಲಾವಿದರೇ. ಡಾ. ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್, ಗಿರಿಜಾ ಲೋಕೇಶ್, ಅನಂತನಾಗ್, ಬಿ. ಜಯಶ್ರೀ,ಲೋಕನಾಥ್ ಇನ್ನೂ ಹಲವಾರು ಮೇರು ನಟರು ತಮ್ಮ ಇಮೇಜಿಗೆ ಬೆಲೆ ಕೊಡದೇ ಕೇವಲ ಪಾತ್ರ ಪೋಷಣೆಗಾಗಿ ನಟಿಸಿದ್ದಾರೆ , ಆದರೂ ಆ ಸಾಮಾನ್ಯ ಪಾತ್ರಗಳನ್ನು ಜನತೆ ಮರೆಯದ ಹಾಗೆ ಚಿತ್ರಿಸಿದ ಶ್ರೇಯ ಶಂಕ್ರಣ್ಣನಿಗೆ ಸಲ್ಲಬೇಕು. ಅದರಲ್ಲೂ ಸ್ವಾಮಿ ಪಾತ್ರದ ಮಾ. ಮಂಜುನಾಥನ ಅಭಿನಯ ಮನಸ್ಸಿಗೆ ಮುದ ನೀಡುತ್ತದೆ. ಅವನ ಪಾತ್ರ ನೋಡಿದ ಪ್ರತಿಯೊಬ್ಬರೂ ತಾನು ಚಿಕ್ಕವನಿದ್ದಾಗ ಇವನಂತೇ ಇದ್ದೆ ಎಂದು ಒಮ್ಮೆಯಾದರೂ ಅಂದುಕೊಳ್ಳುತ್ತಾರೆ. ಅಂಥ ಕಥಾಮಾಲಿಕೆಯನ್ನು ನಮಗೆ ನೀಡಿದ ಶಂಕ್ರಣ್ಣನಿಗೆ ನನ್ನ ನಮನಗಳು. ನಿನ್ನ ನೆನಪು ನಮ್ಮ ಬಾಳಿಗೆ ದೀಪವಾಗಲಿ.. Once agin ಥ್ಯಾಂಕ್ಯೂ ಶಂಕರಣ್ಣ..

ಅಭಿಯಂತರ

ಇದು ನನ್ನ ಫೇಸ್ಬುಕ್ ಖಾತೆಯಲ್ಲಿ ಬರಕೊಂಡ ಬರಹ :

ಯಂತ್ರಗಳ ಮಾಂತ್ರಿಕ,
ತಾಂತ್ರಿಕತೆಯ ರೂಪಕ..

ದುಃಖೀ ಕನಸುಗಳ ಮಿಶ್ರಿತ
ಸುಖೀ ಜೀವನದ ಆಶ್ರಿತ...

ಕುಂಚವ ಹಿಡಿಯುವ ಚಿತ್ರಕಾರ,
ಕಂಚಿನ ಕಂಠದ ಗಾಯಕ..

ಕಣ್ಣಲ್ಲೇ ಸೆರೆಹಿಡಿಯುವೆ ಚಿತ್ರಸೌಂದರ್ಯ.
ಮನದ ಕನ್ನಡಿಯಂತೆ ನಿನ್ನ ಕವನಗಳ ಆಂತರ್ಯ..

ನಿನ್ನಲ್ಲಿ ಏನಿಲ್ಲ..
ಇದ್ದುದರ ಪರಿವೆಯಿಲ್ಲ..

ಎಲ್ಲ ಇದ್ದೂ ಏನೂ ಸಾಧಿಸದಿರುವೆ..
ಎಲ್ಲ ಸಾಧಿಸಿ ಇನ್ನೂ ಅಳುತಿರುವೆ..

ನೆನೆದು ಗಮ್ಯವ ನಡೆಯುತಿರು ಗುರಿಕಾರ..
ಭಾರತಿಯ ಉಜ್ವಲ ಭವಿಷ್ಯಕ್ಕೆ ನೀ ಹರಿಕಾರ..

ತಲುಪುವಂತವನಾಗು ವಿಶ್ವೇಶ್ವರಯ್ಯನವರ ಎತ್ತರ..
ಓ ಅಭಿಯಂತರ..
ಮೌಢ್ಯದ ಜೀವನ-ಪ್ರಶ್ನೆಗೆ ನೀನಾಗು ಉತ್ತರ... :-)